ತಪಸ್ಸು -
ತಪ್ ಎನ್ನವ ಧಾತುವಿನಿಂದ ಬಂದ ಈ ಪದಕ್ಕೆ ತಪಿಸುವುದು, ಬೇಯುವುದು ಎಂಬ ಅರ್ಥವಿದೆ. ಬೇಸಗೆಯಲ್ಲಿ ಪಂಚಾಗ್ನಿಗಳ ಮಧ್ಯೆ ಇರುವುದು ತಪಸ್ಸು ಎನಿಸಿತು. ಅನಂತರ ಯಾವುದೇ ವಿಧವಾದ ಕಠಿಣ ನಿಯಮ, ವ್ರತಗಳಿಗೆ ನೋನುವುದು ತಪಸ್ಸೆನಿಸಿತು. ತಪಸ್ಸು ನಿಜವಾಗಿ ಮಾನಸಿಕ, ದೈಹಿಕ ಅಥವಾ ಬೌದ್ಧಿಕ ಕರ್ಮ. ಯಜ್ಞಯಾಗಾದಿಗಳಿಗೆ ಇಂದ್ರಜಾಲಕ್ಕೆ ಬದಲಾಗಿ ಬಳಕೆಗೆ ಬಂದ ಕರ್ಮ. ಇದು ಮಾನವರ ದೇವತೆಗಳ ಅಥವಾ ಪರಮಾತ್ಮನ ಕರ್ಮವಾಗಿ ಅವರವರ ಯೋಗ್ಯತೆಗನುಣವಾಗಿ ಫಲವನ್ನು ನೀಡುತ್ತದೇ. ಇದು ಸಾಮಥ್ರ್ಯವಾಗಿ, ಶಕ್ತಿಯಾಗಿ, ಬಲವಾಗಿ, ಶಕ್ತಿಗೆ ಪ್ರತಿಶಕ್ತಿಯಾಗಿ ಕೆಲಸಮಾಡುತ್ತದೆ. ಇದು ಸ್ವಭಾವ, ಸ್ವಗುಣ, ಸ್ವಧರ್ಮವೂ ಹೌದು.

ತಪಸ್ಸಿನ ಕಲ್ಪನೆ ವೇದದಲ್ಲಿದೆ. ವೈದಿಕ ಮತ್ತು ಅವೈದಿಕ ದರ್ಶನಗಳೆರಡರಲ್ಲೂ ಇದು ವಿಶಿಷ್ಟ ಸ್ಥಾನವನ್ನು ಪಡೆದಿದೆ.
ಋಗ್ವೇದದಲ್ಲಿ ತಪಸ್ಸೆಂದರೆ ಶಾಖ, ಭಕ್ತಿಯ ಉದ್ರೇಕ, ವ್ರತ, ಆತ್ಮತ್ಯಾಗ ಎಂದರ್ಥ. ಇದರ ಪ್ರಕಾರ ತಪಸ್ಸಿಗೆ ಸೃಷ್ಟಿಸಾಮಥ್ರ್ಯ, ಮನುಷ್ಯನನ್ನು ದೇವತೆಗೆ ಸರಿಸಮಾನನ್ನಾಗಿಸುವ ಸಾಮಥ್ರ್ಯ ಸ್ವರ್ಗಸೌಖ್ಯವನ್ನು, ಸ್ವರ್ಗದೊಡೆತನವನ್ನು ತಂದುಕೊಡುವ ಸಾಮಥ್ರ್ಯಗಳುಂಟು.

ಅಥರ್ವವೇದ ವ್ರತನಿಯಮಗಳಾಚರಣೆಯೇ ತಪಸ್ಸು ಎಂದು ಹೇಳಿ ಅದು ಮನುಷ್ಯನ ಎಲ್ಲ ವಿಧದ ಆಸೆಗಳನ್ನೂ ಪೂರೈಸುತ್ತದೆ ಎನ್ನುತ್ತದೆ. ಬ್ರಾಹ್ಮಣಗಳ ಅಭಿಪ್ರಾಯವೂ ಇದೇ ಆಗಿದೆ.
ಉಪನಿಷತ್ತುಗಳು ತಪಸ್ಸನ್ನು ಬ್ರಹ್ಮಸಾಮಥ್ರ್ಯಕ್ಕೆ, ಚೈತನ್ಯಕ್ಕೆ, ಸ್ವಪ್ರಯತ್ನಕ್ಕೆ, ಆಲೋಚನೆಗೆ, ಸ್ವನಿಯಂತ್ರಣಕ್ಕೆ, ಆತ್ಮಸಂಯಮಕ್ಕೆ, ಅಧ್ಯಯನಕ್ಕೆ, ಬ್ರಹ್ಮಚರ್ಯಕ್ಕೆ, ವೈರಾಗ್ಯಕ್ಕೆ, ಧಾರ್ಮಿಕ ವಿಧಿಗಳಿಗೆ ಅಂತಿಮವಾಗಿ ಪರಬ್ರಹ್ಮಕ್ಕೆ ಸಮಾನ ಎಂದು ಅಭಿಪ್ರಾಯಪಡುತ್ತವೆ. ಇವುಗಳ ಪ್ರಕಾರ ಕೌಟುಂಬಿಕ, ಸಾಮಾಜಿಕ ಕರ್ತವ್ಯವನ್ನರಿಯಲು, ಅದಕ್ಕನುಗುಣವಾದ ಕ್ರಿಯೆಯಲ್ಲಿ ತೊಡಗುವಂತಾಗಲು, ಪರಮ ಸತ್ಯವನ್ನರಿಯಲು ಸಹಾಯಕವಾಗುವ ಕರ್ಮವೂ ತಪಸ್ಸು. ಇದೇ ಅಭಿಪ್ರಾಯ ಗೀತೆಯಲ್ಲೂ ವ್ಯಕ್ತವಾಗಿದೆ. ಉಪನಿಷತ್ತುಗಳು ತಪಸ್ಸನ್ನು ಮೋಕ್ಷಜ್ಞಾನೋದಯಗಳನ್ನುಂಟುಮಾಡುವ ಆತ್ಮಜ್ಞಾನ, ಬ್ರಹ್ಮಜ್ಞಾನ, ಅಮೃತತ್ತ್ವಗಳನ್ನು ತಂದುಕೊಡುವ, ಸೃಷಿಯನ್ನುಂಟುಮಾಡುವ ಸಹಾಯಕ ಸಾಧನವೆಂದೂ ಪರಿಗಣಿಸುತ್ತವೆ.

ಭಗವದ್ಗೀತೆಯ ಪ್ರಕಾರ ತಪಸ್ಸೆಂದರೆ ಆತ್ಮಸಂಯಮ: ವ್ಯಕ್ತಿ ತನ್ನನ್ನು ತಾನು ಹದ್ದಿನಲ್ಲಿರಿಸಿಕೊಂಡು ಉದ್ವೇಗಕ್ಕವಕಾಶಕೊಡದೆ ಪ್ರಸನ್ನಚಿತ್ತನಾಗಿರುವುದು: ಆತ್ಮೋತ್ಕರ್ಷ ಸಾಧಕ ಕ್ರಮ ನಿಯಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಸಮಸ್ತಕರ್ಮ; ಧ್ಯೇಯ ವಸ್ತುವಿನ ಬೇರಾವುದನ್ನೂ ಸ್ಮರಿಸದ ತದೇಕನಿಷ್ಠೆ; ವ್ಯಕ್ತಿ ತನಗೆ ಬೇಕೆನ್ನಿಸುವ ಉಪಭೋಗಗಳನ್ನು ಕಡಿಮೆ ಮಾಡಿ ಉದ್ದೇಶಕ್ಕಾಗಿ ಶ್ರಮಿಸುವ ಸತತ ಸಂಕಲ್ಪಾನುಸಂಧಾನ-ಹೀಗೆಂದು ವರ್ಣಿಸಿದೆ, ಪರಿಶುದ್ಧಕಾರಿಯಾಗಿ ಕೆಲಸ ಮಾಡುವುದರ ಮೂಲಕ ವ್ಯಕ್ತಿಯನ್ನು ಪಾಪವಿಮುಕ್ತನನ್ನಾಗಿಸುವುದೆಂದೂ ತಪಸ್ಸನ್ನು ನಿಷ್ಕಾಮವಾಗಿ ಆಚರಿಸದಿದ್ದರೆ ಬಂಧನಕಾರಿಯಾಗಿ ಕೆಲಸ ಮಾಡುತ್ತದೆಂದೂ ಹೇಳುತ್ತದೆ. ತಪಸ್ಸನ್ನು ಒಂದು ಭಾವನೆ ಎಂದೂ ಸಾತ್ತ್ವಿಕಗುಣವೆಂದೂ ಬ್ರಾಹ್ಮಣ ಧರ್ಮವೆಂದೂ ಪುಣ್ಯಸಾಧಕವೆಂದೂ ಪರಿಗಣಿಸುತ್ತದೆ. ಇದರ ಪ್ರಕಾರ ಪರಮಾತ್ಮನೇ ತಪಸ್ಸುಗಳ ಭೋಕ್ತø ಮತ್ತು ತಪಸ್ವಿಗಳ ತಪಸ್ಸು.

ಇದರಲ್ಲಿ ತಪಸ್ಸಿನ ಮೂರು ಪ್ರಕಾರಗಳ ವಿವರಣೆ ಇದೆ. ದೇವ ಬ್ರಾಹ್ಮಣ ಆಚಾರ್ಯ ಜ್ಞಾನಿಗಳ ಪೂಜೆ, ಶೌಚ, ಆರ್ಜವ, ಬ್ರಹ್ಮಚರ್ಯ, ಅಹಿಂಸೆಗಳು ಕಾಯಿಕ ತಪಸ್ಸು. ಅನುದ್ವಿಗ್ನ ಸತ್ಯಪ್ರಿಯ ಹಿತವಚನ, ಸ್ವಾಧ್ಯಾಯಗಳು ವಾಚಿಕ ತಪಸ್ಸು. ಮನಸ್ಸಿನ ಪ್ರಸನ್ನತೆ, ಸೌಮ್ಯಭಾವ, ಮೌನ, ಚಿತ್ತನಿರೋಧ, ಭಾವ ಶುದ್ಧಿಗಳು ಮಾನಸಿಕ ತಪಸ್ಸು. ಈ ಮೂರು ಬಗೆಯ ತಪಾಚರಣೆಯ ಉದ್ದೇಶಕ್ಕನುಗುಣವಾಗಿ ಪುನ: ತಪಸ್ಸನ್ನು ಸಾತ್ತ್ವಿಕ, ರಾಜಸ, ತಾಮಸವೆಂದು ಮೂರು ವಿಧವಾಗಿ ವರ್ಗೀಕರಿಸಿದೆ. ಫಲಾಪೇಕ್ಷೆ ಇಲ್ಲದೆ ಸಮಾಹಿತರಾದ ಮನುಷ್ಯರು ಪರಮಶ್ರದ್ದೆಯಿಂದಾಚರಿಸುವ ಈ ಮೂರು ಬಗೆಯ ತಪಸ್ಸು ಸಾತ್ತ್ವಿಕವಾದರೆ, ಗೌರವಪೂಜೆ, ಸತ್ಕಾರಗಳಿಗಾಗಿ ದಂಭದಿಂದಾಚರಿಸಲ್ಪಡುವ ತಪಸ್ಸು ರಾಜಸ ಮೂಢಬುದ್ಧಿಯಿಂದ ತನಗೆ ಪೀಡೆಯುಂಟಾಗುವುದನ್ನೂ ಲಕ್ಷಿಸದೆ ಇತರ ನಾಶಕ್ಕಾಗಿ ಆಚರಿಸಲ್ಪಡುವ ತಪಸ್ಸು ತಾಮಸ.

ಪುರಾಣಗಳಲ್ಲಿ ಸತ್ಯಕ್ಕೆ, ಆತ್ಮತ್ಯಾಗಕ್ಕೆ ದೇವಾನುದೇವತೆಗಳನ್ನು ವ್ಯಕ್ತಿಯ ನೈತಿಕ ಅನೈತಿಕ, ಐಹಿಕ ಪಾರಲೌಕಿಕ, ಆಧ್ಯಾತ್ಮಿಕ ಆಸೆ ಆಕಾಂಕ್ಷೆಗಳನ್ನೀಡೇರಿಸುವಂತೆ ಬಲವಂತಪಡಿಸುವ ಬಲಕ್ಕೆ ದೈವೀಕೃಪೆಯನ್ನು ಪಡೆಯಲು ಇರುವ ಸಾಧನಕ್ಕೆ ಸಮಾನವಾಗಿ ತಪಸ್ಸನ್ನು ಪರಿಭಾವಿಸಲಾಗಿದೆ. ಇವುಗಳ ಪ್ರಕಾರ ಪ್ರಾಣಿದಯೆ, ಮಧುರವಾಕ್, ಪ್ರೀತಿ, ಅಕ್ರೌರ್ಯ, ಅಜ್ಞಾನ ಹಮ್ಮು ಬಿಮ್ಮು ಕಾಪಟ್ಯರಾಹಿತ್ಯ, ಅಹಿಂಸೆ ಸತ್ಯವಂತಿಕೆ, ಶಾಂತಿಪ್ರಿಯತೆಗಳೇ ಮನುಷ್ಯನಿಗೆ ಸರ್ವಕಾಲದಲ್ಲೂ ಯೋಗ್ಯವಾದ ಮತ್ತು ನಿಜವಾದ ತಪಸ್ಸು. ವ್ಯಕ್ತಿಯಲ್ಲಿನ ತಪೋ ಪ್ರವೃತ್ತಿಯ ಅಭಾವವೇ ವರ್ಣಭೇದಕ್ಕೆ ಕಾರಣವೆಂದು ಇವುಗಳ ಅಭಿಪ್ರಾಯ. ತಪಸ್ಸು ಮಾಡುವುದೆಂದರೆ ವಿರಾಗಿಯಾಗುವುದು, ಉಪವಾಸ ಮಾಡುವುದು ಎಂದರ್ಥ ಎಂದು ಇವು ಹೇಳುತ್ತವೆ; ವ್ಯಕ್ತಿಯ ಎಲ್ಲ ಬಯಕೆಗಳನ್ನೂ ತಪಸ್ಸು ಈಡೇರಿಸುತ್ತದೆ ಎಂದು ಪರಿಭಾವಿಸುತ್ತವೆ.

ವೇದಾಂತದಲ್ಲಿ ತಪಸ್ಸೆಂದರೆ ಮಾಯೆ ಅಜ್ಞಾನಗಳಿಂದ ಪಾರಾಗಲು, ಆಧ್ಯಾತ್ಮಿಕತೆಯನ್ನು ಪಡೆಯಲು, ದೈವೀಕೃಪೆಯನ್ನು ಪಡೆದು ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯಲು ಸಹಾಯ ಮಾಡುವಂಥದು ಎಂಬ ವಿವರಣೆಯಿದೆ.

ಸಾಂಖ್ಯ-ಯೋಗದ ಪ್ರಕಾರ ಶೀತೋಷ್ಣಗಳನ್ನು, ಹಸಿವೆ ಬಾಯಾರಿಕೆಗಳನ್ನು ಸಹಿಸುವುದೇ ತಪಸ್ಸು; ಮೋಕ್ಷಮಾರ್ಗದಲ್ಲಿ ಇದೂ ಒಂದು ಸ್ಥಾನವನ್ನು ಪಡೆದಿದೆ. ಇದು ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡುವ ಸಾಧನವೂ ಅದ್ಭುತವಾದ ಶಕ್ತಿಗಳನ್ನು ಕೈ ವಶಮಾಡಿಕೊಳ್ಳುವ ಸಾಧನವೂ ಹೌದು.

ಜೈನಧರ್ಮದಲ್ಲಿ ಜೀವ ಅಜೀವದ ಸಂಪರ್ಕದಿಂದುಂಟಾದ ಬಂಧದಿಂದ ಬಿಡುಗಡೆ ಹೊಂದಲು ಮಾಡುವ ಕರ್ಮವೇ ತಪಸ್ಸು. ಇದು ಚತುರೋಪಾಸನೆಗಳಲ್ಲಿ ಒಂದು. ದಶಧರ್ಮಗಳಲ್ಲೊಂದು, ಷಡ್ಗುಣಗಳಲ್ಲಿ ಒಂದು, ಪಂಚಚಾರಗಳಲ್ಲಿ ಒಂದು. ಈ ಧರ್ಮದ ಪ್ರಕಾರ ತಪಸ್ಸಿನಲ್ಲಿ ಬಾಹ್ಯ, ಅಭ್ಯಂತರ ಎಂದು ಎರಡು ವಿಭಾಗಗಳುಂಟು. ಅನಶನ (ಉಪವಾಸ ಮಾಡುವುದು), ಅವಮೋದರ್ಯ (ಬೇಕಾದುದಕ್ಕಿಂತ ಕಡಿಮೆ ಆಹಾರಸೇವನೆ), ವೃತ್ತಿ (ಪರಿ) ಸಂಖ್ಯಾನ (ಊಟಕ್ಕೆ ಹೋಗುವಾಗ ವಿಶಿಷ್ಟ ನಿಯಮಗಳನ್ನನುಸರಿಸುವುದು), ರಸಪರಿತ್ಯಾಗ (ಆರು ರಸಗಳನ್ನು ತ್ಯಜಿಸುವುದು, ವಿವಕ್ತಶಯನಾಸನ (ಏಕಾಂತವಾಸ) —ಇವು ಆರು ಬಾಹ್ಯತಪಸ್ಸುಗಳು. ಪ್ರಾಯಶ್ಚಿತ್ತ (ಮಾಡಿದ ತಪ್ಪಿಗೆ ಹಿರಿಯರು ವಿಧಿಸಿದ ಶಿಕ್ಷೆಯನ್ನನುಭವಿಸುವುದು), ವಿನಯ (ದರ್ಶನಜ್ಞಾನ ಚಾರಿತ್ರ್ಯಗಳಲ್ಲಿ ಮುಂದುವರಿದವರಲ್ಲಿ ವಿನೀತವಾಗಿ ವರ್ತಿಸುವುದು). ವೈಯಾಕೃತ್ಯ (ರೋಗಿ ವೃದ್ಧರು ಹಾಗೂ ಮುನಿಗಳ ಸೇವೆ ಮಾಡುವುದು), ಸ್ವಾಧ್ಯಯ (ಶಾಸ್ತ್ರಾಭ್ಯಾಸ ಮಾಡುವುದು) ಉತ್ಸರ್ಗ (ಶರೀರದ ಬಗ್ಗೆ ಉಪೇಕ್ಷೆಯಿಂದಿರುವುದು) ಧ್ಯಾನ (ಧರ್ಮ ವಿಷಯಗಳನ್ನು ಮುಕ್ತಿಮಾರ್ಗವನ್ನು ಕುರಿತು ಚಿಂತಿಸುವುದು) — ಈ ಆರೂ ಅಭ್ಯಂತರ ತಪಸ್ಸುಗಳು. ತಪಸ್ಸಿಗೆ ವಿರಕ್ತಿ, ಇಂದ್ರಿಯನಿಗ್ರಹ ಕಾಯಕ್ಲೇಶ ಸಹನೆ ಇತ್ಯಾದಿ 24 ಪರೀಷಹಗಳು ಅತ್ಯಾವಶ್ಯಕವೆಂದು ಇದರ ಅಭಿಪ್ರಾಯ.

ತಪಸ್ಸಿನ ಮಹತ್ವವನ್ನು ಕಡೆಗಣಿಸಲಾಗಿರುವ ನಿದರ್ಶನಗಳೂ ಉಂಟು. ವೈರಾಗ್ಯದಿಂದ, ತಪಸ್ಸಿನಿಂದ ಯಾವ ಪ್ರಯೋಜನವೂ ಇಲ್ಲದ ಕಾರಣ ಪುತ್ರಪ್ರಾಪ್ತಿಗಾಗಿ ಮನುಷ್ಯ ಆಶಿಸುವುದೇ, ಪ್ರಯತ್ನಿಸುವುದೇ ಯೋಗ್ಯ ಎಂದು ಬ್ರಾಹ್ಮಣಗಳು ಹೇಳಿದರೆ, ಉಪನಿಷತ್ತುಗಳು ಮತ್ತು ವೇದಾಂತ ದೈವೀಕೃಪೆ, ಗುರುಕೃಪೆ ಪ್ರಾಪ್ತಿಯಾಗದ ಹೊರತು ತಪಸ್ಸು ಫಲವನ್ನು ಕೊಡಲಾರದು ಎನ್ನುತ್ತವೆ. ಎಲ್ಲ ಕಾಲಗಳಲ್ಲಿಯೂ ಯೋಗಯುಕ್ತನಾಗಿರಬೇಕೆಂದು ತಿಳಿದ ಯೋಗಿ ವೇದಗಳಲ್ಲಿಯೂ ತಪಸ್ಸಗಳಲ್ಲಿಯೂ ದಾನಗಳಲ್ಲಿಯೂ ಯಾವ ಪುಣ್ಯಫಲ ಆಗುವುದೆಂದು ಶಾಸ್ತ್ರದಲ್ಲಿ ಹೇಳಿದೆಯೋ ಅದೆಲ್ಲವನ್ನೂ ಅತಿಕ್ರಮಿಸುತ್ತಾನೆ; ಎಲೈ ಕುರುವೀರ, ವೇದಾಧ್ಯಯನ ಉಗ್ರವಾದ ತಪಸ್ಸು ಇವುಗಳಿಂದಲೂ ಈ ವಿಶ್ವರೂಪವುಳ್ಳ ನನ್ನನ್ನು ಮನುಷ್ಯಲೋಕದಲ್ಲಿ ನೋಡಲು ಬೇರೆ ಯಾರಿಗೂ ಸಾಧ್ಯವಾಗುವುದಿಲ್ಲ, ಎಂದು ಭಗವದ್ಗೀತೆ ಹೇಳುತ್ತದೆ. ಬೌದ್ಧಧರ್ಮವಂತೂ ಸ್ಪಷ್ಟವಾಗಿ ತಪಸ್ಸನ್ನು ಒಂದು ಜ್ಞಾನಸಾಧನವನ್ನಾಗಿ, ಮೋಕ್ಷಸಾಧನವನ್ನಾಗಿ, ಪುಣ್ಯಸಾಧನವನ್ನಾಗಿ ಪರಿಗಣಿಸಲು ನಿರಾಕರಿಸುತ್ತದೆ.

ಹೀಗೆ ತಪಸ್ಸನ್ನು ಕುರಿತು ವಿವಿಧ ಆಲೋಚನೆಗಳು ಕಂಡುಬರುತ್ತವೆ.
(ವಿ.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ